Browse Home

ಎಪಿಸೋಡ್ ಎರಡು: ನೀರುಳ್ಳಿ ಹಾವು

ಬಸ್ ಸ್ಟ್ಯಾಂಡ್ ನಿಂದ ಇಳಿ-ಮಧ್ಯಾಹ್ನದ ಬಿಸಿಲಿನಲ್ಲಿ ಮನೆಯ ಕಡೆ ನಡೆಯುತ್ತಿದ್ದ ನಾನು ಮತ್ತೆ ಹಿಂತಿರುಗಿ ನೋಡಿದೆ.

ಬಿದಿರು ಹೂವಾದಾಗೊಮ್ಮೆ ಬೀಳುವಂತಹ ಅತಿ ಅಪರೂಪದ ಕನಸಿನ ನಡುವಲ್ಲಿರುವಾಗ, ಕರ್ಕಶ ಸದ್ದಿನ ಅಲಾರ್ಮ್ ಕ್ಲಾಕೊಂದು ಕಿರ್ರನೆ ಚೀರಿ ಎಬ್ಬಿಸಿದಂತೆ ಭಾಸವಾಗುತ್ತಿತ್ತು ನನಗೆ. ಕನಸ್ಸು ಮತ್ತೆ ಮುಂದುವರೆಯಬಹುದೇನೋ ಎಂಬ ಹಂಬಲದಲ್ಲಿ ಮತ್ತೆ ಕಣ್ಮುಚ್ಚುವ ಆ ಆಜನ್ಮ ಚಟ ನನ್ನನ್ನು ‘ವಾಪಸ್ ನಡೆ’ ಎಂದು ಈಗೊಂದು ನೂರು ಸಲ ಹಿಂತಿರುಗಿ ನೋಡುವಂತೆ ಮಾಡಿತ್ತು. ಪ್ರತಿ ಸಲವೂ ಕಂಡಿದ್ದು ಅದೇ ಬಿಕೋ ಎನ್ನುತ್ತಿದ್ದ ನಮ್ಮೂರ ಮಧ್ಯಾಹ್ನದ ಬಿಸಿ ಡಾಂಬರ್ ರೋಡು. ಗೊಂದಲಗಳ ಸಂತೆಯಲ್ಲಿದ್ದ ನನ್ನ ತಲೆಬುರುಡೆಗಿಂತ ಅದು ತಂಪಾಗಿತ್ತು ಬಿಡಿ!

ಬಸ್ಸಿನಲ್ಲಿ ತುಂಬಾ ಡೀಸೆಂಟಾಗಿ ಅರ್ಧ ಇಂಚು ಸರಿದು ಕುಳಿತಿದ್ದೆ ಅವಳ ಬಗಲಿಗೆ. ನೀರುಳ್ಳಿ ಹಾವಿನಂತೆ ಮೆಲ್ಲಗೆ ನನ್ನ ಭುಜಕ್ಕೊರಗಿ ಬಹುತೇಕ ನನ್ನನ್ನು ಬೆಚ್ಚಿ ಬೀಳಿಸಿಬಿಟ್ಟಿದ್ದಳು. ನನ್ನ ಎದೆ ಬಡಿತವೋ, ಒಂದು ಫಾರ್ಲೊಂಗ್ ಓಡಿ ಬಂದ ಹಾಗೆ ಟಾಪ್-ಗೇರ್ ಗೆ ಏರಿ ಬಿಟ್ಟಿತ್ತು. ಒಂದೊಂದು ಈಯರ್-ಫೋನನ್ನು ಕಿವಿಗೆ ಚುಚ್ಚಿಕೊಂಡು ಇಬ್ಬರೂ ಕೇಳುತ್ತಿದ್ದ ಯಾವುದೋ ರೋಮಾಂಟಿಕ್ ಹಿಂದಿ ಹಾಡು ಇನ್ನು ನನ್ನ ತಲೆಯೊಳಗೆ ಹೋಗಲು ಸಾಧ್ಯವೇ ಇರಲಿಲ್ಲ. ಅದೀಗ ನನ್ನ ಭುಜದ ಮೇಲಿದ್ದ ಅವಳ ತಲೆಯನ್ನು ಮಾನಿಟರ್ ಮಾಡುವುದರಲ್ಲಿ ತಲ್ಲೀನವಾಗಿ ಹೋಗಿತ್ತು. ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದ ಜಟಿಲ ಪ್ರಶ್ನೆಗಳ ಬಗ್ಗೆ ಅರಿವೇ ಇಲ್ಲದ ಹಾಗೆ!

ಈಗ ಅವಳು ಏನನ್ನು ಯೋಚಿಸುತ್ತಿರಬಹುದು? ಮುತ್ತಿನಂತೆ ಹೊಳೆವ ಕಣ್ಣಂತೂ ತೆರೆದೇ ಇದೆ. ನಿದ್ದೆ ಬಂದು ಒರಗಿದ್ದಂತೂ ಅಲ್ಲ. ಏನಿದರ ಅರ್ಥ? ನಾನೇನು ಮಾಡಲಿ? ಒಂದು ಕಾಲದಲ್ಲಿ ಹಾವು-ಮುಂಗುಸಿಗಳಂತಿದ್ದು ಈಗ ಅತ್ಯುತ್ತಮ ಸ್ನೇಹಿತರಾಗಿರುವುದೇನೋ ನಿಜ. ಆದರೆ ಇದು ಬರೀ ಗೆಳೆತನವೆ? ನಾನು ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸುತಿದ್ದೇನೆಯೇ? ಯೋಚಿಸಿದಷ್ಟೂ ಪ್ರಶ್ನೆಗಳು ಇನ್ನಷ್ಟು ಕ್ಲಿಷ್ಟಗೊಳ್ಳುತ್ತಲೇ ಇದ್ದವು. ಇನ್ನೊಂದು ಕೊನೆಯ ಯಕ್ಷಪ್ರಶ್ನೆಯಿತ್ತು: ಯಾವತ್ತೂ ಆಮೆಗತಿಯಲ್ಲಿ ಸಾಗುತ್ತಿದ್ದ ನಮ್ಮೂರಿನ ಡಕೋಟ ಕೆ ಎಸ್ ಆರ್ ಟಿ ಸಿ ಎಕ್ಸ್ ಪ್ರೆಸ್ ಅವತ್ತು ಮಾತ್ರ ಯಾಕೆ ಬುಲ್ಲೆಟ್ ಟ್ರೈನ್ ನ ವೇಗದಲ್ಲಿ ಓಡುತ್ತಿತ್ತು? ಇದೇನಾ ಐನ್ ಸ್ಟೀನ್ ರ ಸಾಪೇಕ್ಷತಾ ಸಿದ್ಧಾಂತ ಅಂದರೆ?

ನೋಡನೋಡುತ್ತಿದ್ದಂತೆಯೇ ಬಸ್ಸು ಊರು ತಲುಪಿಯೇ ಬಿಟ್ಟಿತ್ತು. ಬಸ್ಸಿನಿಂದಿಳಿದು ವಾಪಸ್ ಹೋಗುವಾಗ ಅವಳು ನನ್ನ ಕಣ್ಣಲ್ಲಿ ಕಣ್ಣಿಟ್ಟು, ‘ಮಿಸ್ ಯೂ’ ಎಂದು ಹೇಳಿ ಅವಳ ಅಪ್ರತಿಮ ಚೆಲುವಿಗೆ ದೂಸ್ರಾ ಮಾತಿಲ್ಲದೆ ಈಗಾಗಲೇ ಸೆರೆಯಾಗಿದ್ದ ನನ್ನ ಬಡಪಾಯಿ ಹೃದಯವನ್ನು ಇನ್ನಷ್ಟು ಒಳಕ್ಕೆ ನೂಕಿದ್ದಳು. ಅವಳ ವಿಸ್ಮಯ ನೋಟದ ಬಲೆಯಲ್ಲಿ ಸಿಲುಕಿದ್ದ ನನಗೆ ಅವಳಿಗೆ ಉತ್ತರವಾಗಿ ತುಟಿಗಳನ್ನು ಅಲ್ಲಾಡಿಸಲು ಸಾಧ್ಯವಾಗಿತ್ತೆ ಹೊರತು ಮಾತು ಹೊರಬಂದಿರಲಿಲ್ಲ. ಅವಳು ತಿರುಗಿ ಹೊರಟು ಕಣ್ಮರೆಯಾಗುವ ತನಕವೂ ದಿಗಿಲಾಗಿ ನಿಂತು ಎವೆಯಿಕ್ಕದೆ ನೋಡಿದ್ದೆ. ಏನೋ ಹೇಳುವುದು ಮರೆತು ಮತ್ತೆ ತಿರುಗಿ ಬಂದಾಳೇನೋ ಎಂಬ ಹುಚ್ಚು ನಿರೀಕ್ಷೆಯಲ್ಲಿ ಮತ್ತೆ ಮತ್ತೆ ತಿರುಗಿ ನೋಡುತ್ತಲೇ ಇದ್ದೆ. ಗಂಟೆಗಟ್ಟಲೆ ದಿನ ರಾತ್ರಿ ಫೋನಿನಲ್ಲಿ ಹರಟುತ್ತಿದ್ದ ನನಗೂ ಇಂಜಿನಿಯರಿಂಗ್ ನ ಮೊದಲನೆಯ ಸೆಮೆಸ್ಟರ್ ಕಳೆದು ಹದಿನೈದು ದಿನಗಳ ‘ವನವಾಸ’ವಿತ್ತು. ಇನ್ನಂತೂ ಮತ್ತೆ ಕಾಲೇಜು ಶುರುವಾಗುವ ತನಕ ಪ್ರತಿದಿನವೂ ಇವತ್ತಿನ ಹ್ಯಾಂಗೊವರ್ ನಲ್ಲೇ ಇರುತ್ತೇನೆಂದು ಖಾತ್ರಿಯಾಗಿಹೋಯಿತು.

ಮನೆ ಸಮೀಪಿಸುತ್ತಿದ್ದಂತೆ ಬಾಗಿಲಲ್ಲೇ ಇದ್ದ ನಮ್ಮ ನಾಯಿ ಜಾಂಬು ನನ್ನನ್ನು ನೋಡಿ ಬೊಗಳಲಾರಂಭಿಸಿತು. ಹೌದು ಮಾರಾಯ್ರೆ! ಅದಕ್ಕೂ ಅವತ್ತೇ ನನ್ನನ್ನು ಕನ್ಫ್ಯೂಸ್ ಮಾಡಬೇಕೆಂದು ಅನಿಸಿಬಿಟ್ಟಿತ್ತು! ಒಂದು ಬಿಸಿ ಬಿಸಿ ಚಹಾ ಇಳಿಸಿ ಆಮೇಲೆ ತಲೆ ಕೆರೆದುಕೊಳ್ಳೋಣ ಎಂದು ಯೋಚಿಸಿ ನಿಟ್ಟುಸಿರಿಡುತ್ತ ಮನೆಯೊಳಕ್ಕೆ ನಡೆದೆ.

ಎಪಿಸೋಡ್ ಒಂದು : ಹೀಗಿತ್ತು ನಮ್ಮ ಲವ್ ಸ್ಟೋರಿ!

Categories: Uncategorized

Tagged as:

Chinmay Hegde

12 replies

Leave a Reply

Your email address will not be published. Required fields are marked *