Browse Home

ಹೀಗಿತ್ತು ನಮ್ಮ ಲವ್ ಸ್ಟೋರಿ!

ನಾನವಳನ್ನು ನೋಡುತ್ತಲೇ ಇದ್ದೆ.

ಪಕ್ಕದಲ್ಲಿ ಕುಳಿತಿದ್ದ ರವಿ ಯಾವುದೊ ಕಾದಂಬರಿಯಲ್ಲಿ ಕಳೆದು ಹೋಗಿದ್ದ. ನನ್ನ ಮುಂದೆಯೂ ಹ್ಯಾರಿ ಪಾಟರ್ ನ ಯಾವುದೋ ಇಂಟರೆಸ್ಟಿಂಗ್ ಪುಟ ತೆರೆದಿತ್ತಾದರೂ ನಾನು ಹಿಂದೆಂದೂ ಇದ್ದಿರದಷ್ಟು ಒಲವಿನಿಂದ ಅವಳ ಹೂಗೆನ್ನೆಯ ಮುಖವನ್ನಷ್ಟೇ ಓದುತ್ತಿದ್ದೆ. ಎಂಟು ವರ್ಷಗಳಿಂದ ನೋಡಿದ್ದ ಅದೇ ಪರಿಚಿತ ಫೇಸ್-ಕಟ್ ಆಗಿದ್ದರೂ ಇಂದು ಅದೇಕೋ ಹೇಳದೆ ಕೇಳದೆ ನನ್ನ ಮನಸ್ಸನ್ನು ಮೆಲ್ಲಗೆ ಕದ್ದು ಬಿಟ್ಟಿತ್ತು ಆ ನಗುಮೊಗ. ಅವಳನ್ನು ದ್ವೇಷಿಸಬೇಕೆಂದು ಈಗೆರಡು ವರ್ಷಗಳಿಂದ ನನಗೆ ನಾನೇ ಹಾಕಿಕೊಂಡಿದ್ದ ಸರ್ಪಗಾವಲು ಇಂದು ಸಡಿಲಗೊಂಡಂತಿತ್ತು. ವರ್ಷಗಟ್ಟಲೆ ಬಂಧಿಸಿಟ್ಟಿದ್ದ ಯಾವುದೊ ಒಂದು ಬಯಕೆ ಸುಳಿವಿಲ್ಲದೆ ಬಿಡುಗಡೆಗೊಂಡುಬಿಟ್ಟಿತ್ತೋ ಏನೊ! ಸದಾ ಅವಳಲ್ಲಿ ತಪ್ಪನ್ನೇ ಹುಡುಕಬಯಸುತ್ತಿದ್ದ ನನಗೆ ಇಂದು ಅವಳಲ್ಲಿ ಹೇಗೆ ನೋಡಿದರೂ ಮುಗ್ದತೆಯಷ್ಟೇ ಕಾಣುತ್ತಿತ್ತು.

ಅವಳ ನಗುವನ್ನು ಕಣ್ಮುಂದೆಯೇ ಪ್ರಿಂಟ್ ಮಾಡಿ ಇಟ್ಟುಕೊಳ್ಳುವುದು ಹೇಗೆ ಎಂಬ ಮಿಲ್ಲಿಯನ್ ಡಾಲರ್ ಪ್ರಶ್ನೆಯನ್ನು ಎರಡು ವರ್ಷದ ಹಿಂದಷ್ಟೇ ಬಿಡಿಸಲಾಗದೆ ಕೈಬಿಟ್ಟಿದ್ದ ನನ್ನ ನೋಟದಲ್ಲಿ ಬಹುಷಃ ಒಂದೇ ಒಂದು ನಿರೀಕ್ಷೆಯಿತ್ತು: ಅವಳು ನಗುವಾಗ ತಪ್ಪಿಯಾದರೂ ಒಂದರ್ಧ ಕ್ಷಣ ಅವಳ ಕಣ್ಣುಗಳ ವಿಸ್ಮಯ ಹೊಳಪು ನನ್ನ ಕಾದು ದಣಿದ ಅಕ್ಷಿಗಳಿಗೆ ತಂಪು ನೀಡಿತೇನೋ ಎಂದು.

ಎರಡು ವರ್ಷಗಳ ಹಿಂದೆ ನಡೆದ ಡ್ರಾಮಾಗಳನ್ನು ಡಿಲೀಟ್ ಮಾಡಲು ಬರುತ್ತಿದ್ದರೆ ನನಗೆ ಅವಳನ್ನು ನೋಡಲು ಮುಲಾಜು ಇರುತ್ತಿರಲಿಲ್ಲ. ಈಗಾಗಲೇ ಅವಳ ದೃಷ್ಟಿಯಲ್ಲಿ ನಾನು ಉಪೇಕ್ಷೆಯ ವಿಷಯವಾಗಿಹೋಗಿದ್ದೆ. ನಾನೊಂದು ವೇಳೆ ಅವಳಲ್ಲೀಗ ಕ್ಷಮೆಯಾಚಿಸಿದರೂ ಅದು ಅವಳಿಗೆ ನಕಲಿಯೆಂದೇ ಅನಿಸಬಹುದೆಂಬ ಅರಿವಿತ್ತು. ನಾಡಿದ್ದು ಫೆಬ್ರುವರಿಯಲ್ಲಿ ಒಂದು ಲೆಟರ್ ಬರಿದರೆ ಮೊದಲೊಂದು ಬಾರಿ ನಾನು ಬರೆದ ಹ್ಯಾಪಿ ಬರ್ತ್ ಡೇ ಚೀಟಿಯ ತರಹ ಹರಿದು ಹಾಕುವಳೇ? ಅಥವಾ ಒಮ್ಮೆ ಏನಾದರೂ ಮಾತನಾಡಿದರೆ ಸೊಪ್ಪು ಹಾಕದೆ ಮತ್ತೆ ಇನ್ನೂ ದೂರನಡೆಯುವಳೇ? ಯಾವಾಗಲಾದರೂ ಚಾನ್ಸ್ ಸಿಕ್ಕಾಗ ಅವಳಂತೆಯೇ ಒಂದು ಇನ್ನೋಸೆಂಟ್ ನಗೆ ಬೀರಲೇ? ಹೀಗೆ ನೂರಾರು ಐಡಿಯಾಗಳಲ್ಲಿ  ಒಂದೂ ಸರಿಯೆನಿಸಲಿಲ್ಲ. ನನಗೂ ಸ್ವಲ್ಪ ಆತ್ಮಗೌರವ ಇರಬೇಕಲ್ಲವೇ? ಅವಳೇ ಬಂದು ಮಾತನಾಡಿಸಲಿ ಎಂದು ಒಂದು ಸಲ ಅನ್ನಿಸಿಬಿಟ್ಟಿತು.

ಹೀಗೆಲ್ಲ ಯೋಚಿಸುತ್ತ ಕುಳಿತಿದ್ದ ನನಗೆ ಬರೋಬ್ಬರಿ ಮುಕ್ಕಾಲು ತಾಸು ಕಳೆದು ಹೋಗಿದ್ದೇ ತಿಳಿಯಲಿಲ್ಲ. ಕ್ಲಾಸ್ ರೂಂ ಎದುರುಗಡೆಯೇ ಇದ್ದ ಬೆಲ್ ಭಾರಿಸಿದಾಗಲೇ ನಕ್ಷತ್ರಿಕನಂತೆ ಕಾಡುತ್ತಿದ್ದ ಯೋಚನೆಗಳ ಬಲೆಯಿಂದ ಹೊರಬಂದಿದ್ದು ನಾನು. ಅವಳೂ ತಟ್ಟನೆ ಎಚ್ಚೆತ್ತಳು ಅನಿಸುತ್ತೆ. ನವತ್ತೈದು ನಿಮಿಷಗಳಲ್ಲಿ ಮೊದಲ ಬಾರಿ ಅಂತೂ ನನ್ನ ಕಡೆ ತಿರುಗಿಯೇ ಬಿಟ್ಟಳು! ಇದನ್ನು ನಿರೀಕ್ಷಿಸಿರದ ನಾನು ಒಮ್ಮೆಲೇ ಏನು ಮಾಡಬೇಕೆಂದು ತಿಳಿಯದೆ ಇಂಗು ತಿಂದ ಮಂಗನಂತೆ ಅತ್ತಿತ್ತ ನೋಡಿದೆ. ಅವಳಿಗಾಗಲೇ ಡೌಟ್ ಬಂದು ಬಿಟ್ಟಿರಬೇಕೆಂದು ಹಲ್ಲುಮಟ್ಟೆ ಕಚ್ಚಿಕೊಂಡೆ. ನಂತರ ಏನೂ ತೋಚದಿದ್ದಾಗ ಏನಾದರು ಆಗಿಯೇ ಹೋಗಲಿ ಎಂದು ಧೈರ್ಯ ಮಾಡಿ ಅವಳತ್ತ ನೋಡಿದೆ. ಅವಳು ನನ್ನನ್ನೇ ನೋಡುತ್ತಿದ್ದಳು. ಅವಳ ತಬ್ಬಿಬ್ಬಾದ ಮುಖದಲ್ಲಿ ‘ವಾಟ್?’ ಎಂಬ ಪ್ರಶ್ನೆಯಿತ್ತು. ನನ್ನ ಕಣ್ಣೀಗ ನನ್ನ ಹಿಡಿತದಲ್ಲಿರಲಿಲ್ಲ. ನನಗೆ ಅವಳ ಹಣೆ ಬರಿದಾಗಿದ್ದನ್ನು ಗಮನಿಸಲೂ ಹೆಚ್ಚು ಹೊತ್ತು ಬೇಕಾಗಲಿಲ್ಲ.ಇಂಥ ಸಮಯದಲ್ಲಿ ಮಾತ್ರ ನೆನಪಿಗೆ ಬರುವ ಮನೆ ದೇವರನ್ನೊಮ್ಮೆ ಅರಿವಿಲ್ಲದೆ ನೆನೆದು ‘ನೀನು ಬಿಂದಿ ಇಟ್ಟುಕೊಂಡಿಲ್ಲ’ ಎಂದು ಅವಳಿಗೆ ಸನ್ನೆ ಮಾಡಿದೆ. ಅವಳ ಪ್ರತಿಕ್ರಿಯೆಯನ್ನು ನೋಡಲು ಮನ ತವತವಿಸುತ್ತಿದ್ದರೂ ಇಷ್ಟು ಹೊತ್ತು ಆ ಕಡೆ ನೋಡಲೇ ಇಲ್ಲ ಅನ್ನೋ ಥರ ಒಂದು ಗಂಟೆಯಿಂದ ತೆರೆದೇ ಇದ್ದ ಅದೇ ಹ್ಯಾರಿ ಪಾಟರ್ ನ ಪುಟವನ್ನು ಮತ್ತೆ ಸಂಭಾವಿತನಂತೆ ಓದಲಾರಂಭಿಸಿಬಿಟ್ಟಿದ್ದೆ.

ಎಷ್ಟು ಸಿಕ್ಕರೂ ಇನ್ನೂ ಬೇಕೆನ್ನುವ ಈ ಹುಚ್ಚು ಮನಸ್ಸು ಕೇಳೀತೇ? ಆ ಪುಟ ಇನ್ನೂ ಮುಗಿಯುವ ಮುನ್ನವೇ ತಡೆಯಲಾರದೆ ಕದ್ದೊಮ್ಮೆ ಮತ್ತೆ ಅವಳತ್ತ ನೋಡಿದೆ. ಜಾದೂ ನಡೆಯಿತೊ ಎಂಬಂತೆ ಅವಳ ಹಣೆಯೀಗ ಬರಿದಾಗಿರಲಿಲ್ಲ. ಅದನ್ನು ನೋಡಿದ ನನ್ನ ಮುಖದಲ್ಲಿ ಮುಗುಳ್ನಗೆ, ಮನಸ್ಸಲ್ಲಿ ಸಮಾಧಾನ ಆವರಿಸಿತು. ಅವಳು ನಾನಂದುಕೊಂಡಷ್ಟು ನನ್ನನ್ನು ದ್ವೇಷಿಸುತ್ತಿರಲಿಲ್ಲ.

ನನಗೆಲ್ಲಿ ಗೊತ್ತಿತ್ತು? ಆರು ವರ್ಷಗಳ ನಂತರ ಅವಳೇ ಇದನ್ನೋದುವ ಮೊದಲಿಗಳಾಗಿರುತ್ತಾಳೆ ಎಂದು!

ಎಪಿಸೋಡ್ ಎರಡು: ನೀರುಳ್ಳಿ ಹಾವು

Categories: Uncategorized

Tagged as:

Chinmay Hegde

42 replies

  1. Tumba chennagide nimma story…Idre intadde ondu love story irbeku chinmay avre…I am very happy for you…nimma story na heege kannadadalli baryodu chennagiratte ansatte nange.

        1. ಅಪ್ರತಿಮ ಸುಂದರಿ, ನನ್ನೊಲವಿನ ಗೆಳತಿ, ಮುಗಿಲೆತ್ತರದ ಕನಸನ್ನೂ ನನಸಾಗಿಸಬಲ್ಲ ಚಂದ್ರ ಚಕೋರಿ 🙂
          What’s in a name? 😉

Leave a Reply

Your email address will not be published. Required fields are marked *